Tuesday, June 23, 2009

ನೀವೇನಂತೀರೀ?

ಇವತ್ತು ಬೆಳಗಿನ್ ಪ್ರೇಯರ್ ಮುಗ್ಸಿ ಏಳೋ ಮೊದ್ಲು "ಯಾಕಿನ್ನೂ ಸುಮ್ಮನಿದ್ದೀ? ಏನಾದ್ರೂ ಮಾಡು" ಅಂತಂದಂಗಾಯ್ತು. ನನ್ನವನನ್ನ ಆಫೀಸಿಗೆ ಕಳ್ಸಿ ಬರೀಲೇಬೇಕಂತ ಡಿಸೈಡ್ ಮಾಡ್ದೆ.

ಆ ಮನುಷ್ಯ, ಅವ್ನ್ ಧರ್ಮದೋಳು ಅನ್ನೋ ಕಾರಣಕ್ಕೇ ಅಷ್ಟು ಸದರ ತಗೊಳ್ಳೋದಾ? ಸರೀನಾ? ಅವ್ನೇನ್ ಮಹಾ ಅಂದ್ಕೊಂಡಿದಾನಾ? ಅವಂದೊಂದ್ ಬ್ಲಾಗಿದೆ. ಅವ್ನ್ ಕತೇಗ್ ಪ್ರಶಸ್ತಿ ಬಂದಿದೆ. ಈಗೊಂದ್ ವರ್ಷದಿಂದ ಒಂದ್ ಪೋರ್ಟಲ್ ನಡ್ಸ್‍ತಿದಾನೆ. ಚೆನಾಗೇ ಬರ್ತಿದೆ. ಹಾಗಂತ ಅವ್ನ್ ಬರವಣಿಗೆ ಮೆಚ್ಚಿದ ಹುಡ್ಗೀಗೆ ಹೀಗ್ ಮಾಡೋದ? ಮೆಚ್ಚುಗೆ ಹೇಳೋ ಹಾಗೂ ಇಲ್ವಾ?

ಅವ್ನ ಬ್ಲಾಗ್ ನೋಡ್ತಿದ್ದೆ, ಓದ್ತಿದ್ದೆ. ಬರ್ದಿದ್ದೆಲ್ಲ ಅಲ್ದಿದ್ರೂ, ಕೆಲವೆಲ್ಲ ಇಷ್ಟ ಆಗೋದು. ಪುಟ್ಟ ಪೋರೀನ್ ಕಾಲ್ ಮೇಲ್ ಇಟ್ಕೊಂಡೂ ಓದ್ತಿದ್ದೆ. ಹಾಗೇ ಪರಿಚಯ ಆಯ್ತು. ಚಾಟಿಂಗ್ ಮಾಡ್ತಿದ್ವಿ. ಒಂದೆರ್ಡು ಸಲ ಹೀಗೆ ಮಾತಾಡಿದ್ ಮೇಲೆ- ವಾಯ್ಸ್ ಚಾಟ್ ಹಾಕು, ಏನ್ ಬಟ್ಟೆ ಹಾಕೊಂಡಿದೀಯ, ಜೀನ್ಸ್-ಟೀಶರ್ಟ್ ಹಾಕೋ ಹುಡುಗೀರ್ ನಂಗಿಷ್ಟ, ವೆಬ್ ಕ್ಯಾಮ್ ಹಾಕು, ನಿನ್ ಫೋಟೋ ಕೊಡು ಅಂತೆಲ್ಲ ಕೇಳಕ್ ಶುರು ಮಾಡ್ದ. ನಂಗೆ ಮದ್ವೆ ಆಗಿದೆ, ಮೂರು ವರ್ಷದ್ ಪೋರಿ ಇದಾಳೆ. ನನಗ್ ಮನೇಲ್ ನೆಮ್ಮದೀ ಇದೆ. ಬ್ಲಾಗ್ ಓದು ಟೈಮ್ ಪಾಸ್ ನಂಗೆ. ನಿಮ್ ಬರಹ ಇಷ್ಟ ಆಗಿದೆ ಅಷ್ಟೇ ಅಂದಿದ್ದೆ. ನನ್ ಫ್ಯಾಮಿಲಿ ಫೋಟೋನೇ ಕಳ್ಸ್‍ದೆ. ಸಾಲ್ದಂತೆ ಮಾರಾಯಂಗೆ. ನಂದೊಬ್ಬಳ್ದೇ ಫೋಟೋ ಬೇಕಂತೆ ಕೊಟ್ಟಿಲ್ಲ. ತುಂಬಾ ದಿನ ಮಾತಾಡಿಲ್ಲ ನಾನು. ನಂಗೆ ಬೇಜಾರಾಗಿತ್ತು.

ಕೆಲವ್ ತಿಂಗ್ಳ್ ಬಿಟ್ಬಿಟ್ಟು ಮೊನ್-ಮೊನ್ನೆ ಮತ್ತೆ ಆನ್‌ಲೈನ್ ಸಿಕ್ರೆ ಅದೇ ರಾಗ ಅವಂದು. ಯಾಕ್ ಬೇಕು ಅಂತ ಕೇಳಿದ್ದಿಕ್ಕೆ, ಬೆಳಗಿನ್ ಬಯ್ಕೆ ಅಂತಾನೆ.? ಇವ್ನೇನ್ ಗರ್ಬಿಣಿ ಹೆಣ್ಣಾ ಮಾರ್ನಿಂಗ್ ಸಿಕ್‍ನೆಸ್ ಬರೋಕೆ? ದಿನಾ ಬೆಳಗ್ಗೆ ಸಂಜೆ ನೋಡ್ಕೊಳಕ್ ಬೇಕಂತೆ. ನಿನ್ ಪ್ರೀತಿ ಹೆಂಡ್ತಿ ಫೋಟೋ ಹಾಕ್ಕೋ ಹೋಗ್ ಅಂದೆ. ಚಾಟ್ ಆಫ್ ಮಾಡ್ದೆ. ಈ ತಿಕ್ಲಂಗೆ ಅದೇನ್ ಮಾಡೋದು? ನಂಗ್ ಮಾತ್ರ ಹಾಂಗ್ ಕೇಳ್ತಿದಾನೋ? ಅಥ್ವಾ ಬೇರೆಯೋರ್ನೂ ಹೀಗ್ ಪೀಡಿಸ್ತಾನೊ? ನಂಗಂತೂ ಗೊತ್ತಿಲ್ಲ. ಆವತ್ತಿಂದ ತಲೆಯೆಲ್ಲ ಕೆಟ್ಟಿತ್ತು. ಏನ್ ಮಾಡೋದಂತ ತಿಳೀತಿರ್ಲಿಲ್ಲ. ಇವತ್ತ್ ಆ ದೇವ್ರೇ ಬರೀ ಅಂದಂಗಾಯ್ತು. ಹಗುರ ಅನ್ನುಸ್ತು. ಬರ್ದೆ.

ನೀವೇನಂತೀರ್ರೀ?

Saturday, April 18, 2009

ನುಂಗೋದ್ ಯಾಕ್ ನಮ್ ಖರ್ಮ?

ನೆನ್ನೆ ಸಂಜಿಕೆ ಅವ್ನು ಮನೀಗ್ ಬಂದಾಗ ಸಂಜೆ ಹೋಗಿ ರಾತ್ರೀನೇ ಆಕ್ಕಿತ್ತ್. ಮಗ್ಳ್ ಊಟ ಮುಗ್ಸಿ ಮಲ್ಗೋಕ್ ರೆಡಿ. ನನ್ನ್ ಗೆಳತಿ ಫೋನ್ ಮಾಡಿದ್ಲಂತ ನಾ ಅವ್ಳ್ ಜತಿ ಮಾತಾಡ್ಕಂಡೇ ಇವಂಗೆ ಕಾಪಿ ಕೊಟ್ಟೆ. ಊಟಕ್ಕಿಟ್ಟೆ. ನೀ ಉಣ್ಣು ಅನ್ನದೇನೇ ತನ್ ಊಟ ಮಾಡಿ ಉಫ್ ಅನ್ಕೊಂಡ್ ಕುಂತಿದ್ದ. ಫೋನ್ ಮುಗ್ಸಿ, ಏನಾತು ಅಂದ್ರೆ ಮಾತಿಲ್ಲ. ಉಬ್ಬಿದ್ ಪೂರಿ ತಗ್ಲಿಲ್ಲ.

ಬಾಳಾ ಹೊತ್ತು ಹಂಗೇ ಕೂತಿದ್ವಿ. ಏನಾತು ಅಂದೆ ಮತ್ತೆ. ಸಿಡೀತು ಪೂರಿ. ನಾಳಿಗ್ ಎಲ್ಲ ರೆಡಿ ಮಾಡೀಯ? ಬೆಳಗ್ಗೆ ಬೇಗ ಎದ್ದ್ ಹೊಂಡೋಣು ಅಂದಿದ್ದಲ್ಲ, ಏನೂ ಮಾಡಂಗಿಲ್ಲ ನೀ. ಹರಟೆಗಿರಕಿ ಹೊಡಿ. ಟೇಮ್ ವೇಸ್ಟ್ ನೀನು. ಅಂದ

ಏನ್ ಬೇಕಿತ್ತು ನಿನಗ. ಎಲ್ಲ ರೆಡಿ ಮಾಡ್ತಾಕಿ ನಾ. ಬೆಳಗ್ಗೆ ತಯಾರಿದ್ರ ಆತಲ್ಲ. ಏನಾಗಬೇಕಿತ್ತು. ಏನಿದೆ ನಿನ್ ಮನಸ್ಸ್ನಾಗ ಅಂದ್ರೆ ಸುಮ್ನೆ ಗುರ್ರ್ ಅಂದ. ಒರಟನಂಗ ನನ್ ಮ್ಯಾಲೆ ಹತ್ ಬಂದ್ರ ನಾ ಏನ್ ಮಾಡೋ ಹಂಗಿದೆ? ಕೂಗಾಡೋಣು ಅಂದ್ರೂ ಯೂಸ್ ಇಲ್ಲ. ಏನ್ ಜಗ್ಳ ಮಾಡಿ ಏನಾಗೋದಿದೆ. ಅಂದ್ರೂ ಹಿಂಗೆಲ್ಲ ಸುಮ್ ಸುಮ್ನೆ ಗುರ್ರ್ ಅನ್ನೋನಲ್ಲ. ಏನೋ ಇದೆ ಅಂತಾ ಗುಮಾನಿ ಇತ್ತು.

ಬೆಳಗ್ಗೆ ಕಾಪಿ ಜೊತೆಗೆ ಬಿಸಿಬಿಸಿಯಾಗಿ ಪಕ್ದಲ್ ಕೂತಾಗ ಅವನೇ ಹೇಳ್ದ, ನೆನ್ನೆ ರಾತ್ರೆ ನಾ ಮನಿಗ್ ಬಂದಾಗ ನೀ ಯಾಕ ಫೋನ್ ಮೇಲಿದ್ದೆ? ಬೇಜಾರಾಗೋಯ್ತು, ಅದ್ಕೇ ರೇಗಿದ್ದೆ. ಇನ್ನ್ ಹಂಗೆಲ್ಲ ಮಾಡ್ ಬ್ಯಾಡ ಅಂದ.

ಹೋ ಹಂಗಾ ವಿಷ್ಯಾ. ಅವ್ನು ಆಪೀಸಿಂದ ಬಂದ್ರೂ ಲ್ಯಾಪ್ ಟಾಪ್ ಏರಿಸ್ಕೊಂಡು ಕುಂತಿರಬೋದು. ಟೀವೀ ನೋಡ್ತಾ ನಾ ಇರೋದನ್ನೇ ಮರೀಬೋದು. ಮಗಳ್ ಜೊತೆ ಮಾತೇ ಆಡ್ದೆ ವಾರಾನೂ ಕಳಿಬೋದು. ಒಂದಿನ, ಒಂದು ಸಂಜಿಕೆ ನಾ ಫೋನ್ ಮೇಲಿದ್ದಿದ್ದಕ್ಕೆ ಅಷ್ಟು ಗುರ್ರಪ್ಪನಾ?

ಇದಕ್ಕೇನ್ ಪರಿಹಾರ? ಹೊಂದ್ಕೋಬೇಕಾ? ತೆಪ್ಪಗೆ ಮುಚ್ಕೊಂಡು ಬಿದ್ಕೋಬೇಕಾ?

Friday, April 17, 2009

ನನ್ನದೇ ಒಂದ್ ಲೋಕ

ಶುಕ್ರವಾರದ್ ಮುಂಜಾನೆ. ಮಗ್ಳನ್ನ ಅವನ್ನ ಕಳ್ಸಿ ಕುಂತಿದ್ದೇ ಇಂಥದ್ದೊಂದು ಯೋಚ್ನೆ ತಲಿಗ್ ಬಂತು. ಬಂದಿದ್ದೇ ಕೆಲ್ಸ ಮಾಡೇಬಿಟ್ಟೆ. ಬ್ಲಾಗ್ ಎಂಬೋ ಮನಿ ಮಾಡಿ ಬಾಗ್ಲ ತೆರೆದೇ ಇಟ್ಟೆ.
ಬ್ಲಾಗ್ ಲೋಕಕ್ಕ ಕಾಲಿಕ್ಕಾತು. ಇನ್ನೇನ ಮಾಡಾಕಿ? ನಂಗಂತೂ ಈಗ ತಿಳಿಯೂಣಿಲ್ಲ. ತಿಳಿವು ಬಂದಾಗ ಮುಂದಿನ್ ಪೋಸ್ಟ್ ಹಾಕೋಣಂತ. ಮೊದ್ಲ್ ತೊದ್ಲ್, ಮತ್ತ್ ಮಾತು ಅಂತಿದ್ಲು ನನ್ನಮ್ಮ. ಇದೂ ಹಂಗೇ.